ಕೆರೆಸರೋವರಗಳನ್ನು ಆಕ್ರಮಿಸಿ, ಅವುಗಳ ನೀರನ್ನು ಕೆಡಿಸುವ ಕಳೆ ಅಂತರಗಂಗೆ (ವಾಟರ್ ಹೈಯಾಸಿಂಥ್). ತ್ಯಾಜ್ಯ ತುಂಬಿದ ನೀರು ಸಿಕ್ಕರೆ ಕೇವಲ ೮ – ೧೦ ದಿನಗಳಲ್ಲಿ ಇಮ್ಮಡಿ ವಿಸ್ತೀರ್ಣಕ್ಕೆ ಹರಡುವ ಭಯಾನಕ ಕಳೆ.
ಇದರ ಬಗ್ಗೆ ಈಗೊಂದು ಒಳ್ಳೆಯ ಸುದ್ದಿ. ಇದು ಕಾರ್ಬೊ ಹೈಡ್ರೇಟುಗಳ ಆಕರ ಮತ್ತು ಇದರಿಂದ ಜೈವಿಕವಾಗಿ ಶಿಥಿಲೀಕರಣವಾಗುವ (ಬಯೋ ಡಿಗ್ರೇಡಬಲ್) ಪ್ಲಾಸ್ಟಿಕನ್ನು ತಯಾರಿಸಬಹುದು.
ಕಳೆಗಳು ಮತ್ತು ಹುಲ್ಲುಗಳಿಂದ ಪಡೆದ ಕಾರ್ಬೊ ಹೈಡ್ರೇಟುಗಳಿಂದ ಪ್ಲಾಸ್ಟಿಕನ್ನು ತಯಾರಿಸಬಹುದು ಎಂದು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ಸುಳಿವನ್ನು ಬೆಂಬತ್ತಿದ ತಮಿಳುನಾಡಿನ ತಿರುನಲ್ವೇಲಿಯ ಎಂ.ಎಸ್. ವಿಶ್ವವಿದ್ಯಾಲಯದ ಸಂಶೋಧಕರು, ಅಂತರಗಂಗೆಯನ್ನು ಪರಿಶೀಲಿಸಿದರು. ಅವರಿಗೆ ತಿಳಿದುಬಂದ ವಿಷಯ: ಅಂತರಗಂಗೆಯಿಂದ ಪಡೆದ ಲಿಗ್ನಿನ್, ಸೆಲ್ಯುಲೋಸ್ ಮತ್ತು ಹೆಮಿ- ಸೆಲ್ಯುಲೋಸ್ ಇಂತಹ ಸಕ್ಕರೆ-ಅಣುಗಳನ್ನು ಪಿಎಚ್ಬಿ (ಪಾಲಿ ಹೈಡ್ರೊಕ್ಸಿ ಬ್ಯುಟೈರೇಟ್) ಆಗಿ ಪರಿವರ್ತಿಸಬಹುದು. ಈ ಪಾಲಿಮರ್ ಜೈವಿಕ ಶಿಥಿಲೀಕರಣವಾಗುವ ಪ್ಲಾಸ್ಟಿಕ್ ತಯಾರಿಸಲು ಕಚ್ಚಾವಸ್ತು.
ಈಗ, ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಮತ್ತು ಪಾಲಿಪ್ರೊಪಿಲಿನ್ ಇಂತಹ ಪೆಟರೋಲಿಯಂ ಆಧಾರಿತ ಕಚ್ಚಾವಸ್ತುಗಳಿಂದ ಪ್ಲಾಸ್ಟಿಕ್ ಮತ್ತು ಕೃತಕ ಪಾಲಿಮರ್ಗಳನ್ನು ಉತ್ಪಾದಿಸಲಾಗುತ್ತಿದೆ. ಇವು ಜೈವಿಕವಾಗಿ ಶಿಥಿಲವಾಗುವುದಿಲ್ಲ – ಅದುವೇ ಇವುಗಳ ದೊಡ್ಡ ಸಮಸ್ಯೆ.
ಅಂತರಗಂಗೆಯಿಂದ ಪಿಎಚ್ಬಿ ತಯಾರಿಸಲಿಕ್ಕಾಗಿ ಎಂ.ಎಸ್. ವಿಶ್ವವಿದ್ಯಾಲಯದ ಸಂಶೋಧಕರು ಅನುಸರಿಸಿದ ವಿಧಾನ: ಅಂತರಗಂಗೆ ಸಸ್ಯವನ್ನು ಒಣಗಿಸಿ, ತೆಳು ಪುಡಿಯಾಗಿ ಮಾಡಿ, ಆಮ್ಲ ಮತ್ತು ಕಿಣ್ವ ಪ್ರಕ್ರಿಯೆಗಳಿಗೆ ಒಳಪಡಿಸಿದರು. ಇದನ್ನು ಬಳಸಿ, ಕುಪ್ರಿಯಾವಿಡಸ್ ನೆಕಟೊರ್ ಎಂಬ ಬ್ಯಾಕ್ಟೀರಿಯಾ ಬೆಳೆಸಿದರು. ಇದು, ಸಾವಯವ ಸಾರಜನಕ ಮತ್ತು ನಿರವಯವ ಸಾರಜನಕ ಇದ್ದಾಗ, ಪಿಎಚ್ಬಿಯನ್ನು ಉತ್ಪಾದಿಸುತ್ತದೆ. ಕ್ಷಾರೀಯ ದ್ರಾವಣವನ್ನು ಬಳಸಿ, ಬ್ಯಾಕ್ಟೀರಿಯಾದ ದೇಹಕ್ಕೆ ಘಾಸಿ ಮಾಡುವ ಮೂಲಕ, ಸಂಶೋಧಕರು ಬ್ಯಾಕ್ಟೀರಿಯಾದಿಂದ ಪಿಎಚ್ಬಿ ಪಡೆದರು.
ಕೈಗಾರಿಕೆ, ವೈದ್ಯಕೀಯ, ಕೃಷಿ ಮತ್ತು ಆಟೋಮೊಬೈಲ್ ಕ್ಷೇತ್ರಗಳಲ್ಲಿ ಪಿಎಚ್ ಬಿಗೆ ಹಲವು ಉಪಯೋಗಗಳಿವೆ ಎನ್ನುತ್ತಾರೆ ಮುಖ್ಯ ಸಂಶೋಧಕ ಎ.ಜಿ. ಮುರುಗೇಶನ್. ಅವರ ಪ್ರಕಾರ, ಅಂತರಗಂಗೆಯಿಂದ ಪಡೆದ ಪಿಎಚ್ಬಿಯ ಗುಣಮಟ್ಟವು ಇತರ ಮೂಲಗಳಿಂದ ಪಡೆದ ಪಿಎಚ್ಬಿಯ ಗುಣಮಟ್ಟಕ್ಕೆ ಸಮಾನವಾಗಿದೆ. ಆದ್ದರಿಂದ, ವರುಷವಿಡೀ ಪುಕ್ಕಟೆಯಾಗಿ ಸಿಗುವ ಅಂತರಗಂಗೆ ಪ್ಲಾಸ್ಟಿಕ್ ತಯಾರಿಗೆ ಪ್ರಧಾನ ಕಚ್ಚಾವಸ್ತುವಾಗುವ ದಿನಗಳು ದೂರವಿಲ್ಲ.