ADDOOR

ಇಡ್ಲಿ - ವಿದೇಶಗಳಿಗೂ ಲಗ್ಗೆಯಿಟ್ಟ ದಕ್ಷಿಣ ಭಾರತೀಯ ತಿನಿಸು

Published on Thursday, December 04, 2025 - 09:50
ಇಡ್ಲಿ - ವಿದೇಶಗಳಿಗೂ ಲಗ್ಗೆಯಿಟ್ಟ ದಕ್ಷಿಣ ಭಾರತೀಯ ತಿನಿಸು

ಅರೆ, ಇಡ್ಲಿ ಬಗ್ಗೆ ಬರೆಯಲಿಕ್ಕೇನಿದೆ? ನಮಗೆಲ್ಲ ತಿಳಿದಿದೆಯಲ್ಲಾ..... ಎನ್ನುತ್ತೀರಾ? ಸರಿ, ಆದರೆ ಅದರ ಬಗ್ಗೆ ನಮಗೆ ತಿಳಿಯದ ಎಷ್ಟೋ ವಿಷಯಗಳಿವೆ. 

ಅಕ್ಕಿ ಮತ್ತು ಉದ್ದು ಹುಳಿ ಬರಿಸಿ, ಆ ಮಿಶ್ರಣದಿಂದ ತಯಾರಿಸುವ ದಕ್ಷಿಣ ಭಾರತದ ಈ ತಿನಿಸು ಈಗ ಜಗತ್ತಿನ ಹಲವೆಡೆಗಳಲ್ಲಿ ಜನಪ್ರಿಯ. ಕೇವಲ ಇಡ್ಲಿ ಸಪ್ಪೆ ಆಹಾರ. ಇದರ ವಿಶೇಷತೆ ಏನೆಂದರೆ ಇದನ್ನು ಬಹುಶಃ ಬೇರೆ ಯಾವುದೇ ನೆಚ್ಚಿಕೊಳ್ಳುವ ಆಹಾರದೊಂದಿದೆ ಬಾಯಿ ಚಪ್ಪರಿಸುತ್ತಾ ಸೇವಿಸಬಹುದು - ವಿಧವಿಧದ ಚಟ್ನಿಗಳು, ಸಾರುಗಳು, ಸಾಂಬಾರುಗಳು, ಕೆಟ್-ಚಪ್‌ಗಳು, ಜಾಮ್‌ಗಳು, ಉಪ್ಪಿನಕಾಯಿಗಳು, ಜೇನು, ಜೋನಿಬೆಲ್ಲ ಇತ್ಯಾದಿ. 

ಮನೆಮನೆಗಳಲ್ಲಿ ಮತ್ತು ಹೋಟೆಲುಗಳಲ್ಲಿ ಇಡ್ಲಿಯನ್ನು ತಿನ್ನಲು ನೀಡುವುದು ತೆಂಗಿನಕಾಯಿ ಚಟ್ನಿ ಮತ್ತು ತರಕಾರಿ ಸಾಂಬಾರಿನ ಜೊತೆ.  ಹೋಟೆಲುಗಳ ಮೆನುಗಳಲ್ಲಿ ಈಗ ಇಡ್ಲಿ ಜೊತೆಗೆ ಇಡ್ಲಿ-ಡಿಪ್ ಎಂಬುದನ್ನೂ ಪಟ್ಟಿ ಮಾಡಿರುವುದನ್ನು ಗಮನಿಸಿದ್ದೀರಾ? ಎರಡು ಇಡ್ಲಿಗಳನ್ನು ಗುಂಡಿ-ತಟ್ಟೆಗೆ ಸುರಿದ ಸಾಂಬಾರಿಗೆ ಹಾಕಿ ತಿನ್ನಲು ಕೊಡುವುದೇ “ಇಡ್ಲಿ-ಡಿಪ್" (ಇದರ ಜೊತೆಗೆ ಚಟ್ನಿ ಇರೋದಿಲ್ಲ.) ಅದಲ್ಲದೆ, ಹೋಟೆಲ್ ಮೆನುಗಳಲ್ಲಿ "ಬಟನ್ ಇಡ್ಲಿ” ಎಂಬುದೂ ಕಾಣಿಸುತ್ತದೆ. ಒಂದಿಂಚು ವ್ಯಾಸದ 8 - 10 ಪುಟಾಣಿ ಇಡ್ಲಿಗಳನ್ನು ಸಾಂಬಾರಿಗೆ ಹಾಕಿ ಗುಂಡಿ-ತಟ್ಟೆಯಲ್ಲಿ ಕೊಡುವುದೇ ಬಟನ್-ಇಡ್ಲಿ.  

ಹಲವು ಮನೆಗಳಲ್ಲಿ ಇಡ್ಲಿ-ಹಿಟ್ಟು ಫ್ರಿಜ್‌ನಲ್ಲಿ ಯಾವಾಗಲೂ ಇರುತ್ತದೆ. ತುರ್ತಾಗಿ ಮನೆಯವರಿಗೋ ಅತಿಥಿಗಳಿಗೋ ತಿನಿಸು ತಯಾರಿಸಬೇಕೆಂದರೆ, ಆ ಹಿಟ್ಟಿನಿಂದ ಫಟಾಫಟ್ ಬಿಸಿಬಿಸಿ ಇಡ್ಲಿ ರೆಡಿ! ಮಳಿಗೆಗಳಲ್ಲಿ ಇಡ್ಲಿ-ರವೆ ಲಭ್ಯ; ಇದು ಇಡ್ಲಿ ತಯಾರಿಸಲಿಕ್ಕಾಗಿ ವಿಶೇಷವಾಗಿ ತಯಾರಿಸಿದ ರವೆ. ಅನೇಕ ದಕ್ಷಿಣ ಭಾರತದ ನಗರಗಳಲ್ಲಿ ಇಡ್ಲಿ-ಹಿಟ್ಟು ಕೂಡಾ ಮಾರಾಟಕ್ಕೆ ಲಭ್ಯ. ಅಂದರೆ, ಮನೆಯಲ್ಲೇ ಇಡ್ಲಿ-ಹಿಟ್ಟು ತಯಾರಿಸಬೇಕೆಂದಿಲ್ಲ. ನಮಗೆ ಬೇಕಾದಾಗ ರೆಡಿಮೇಡ್ ಇಡ್ಲಿ-ಹಿಟ್ಟು ತಂದು ಇಡ್ಲಿ ಬೇಯಿಸಬಹುದು. ಅಂದ ಹಾಗೆ, ಇಡ್ಲಿ ಕೇವಲ ಬ್ರೇಕ್-ಫಾಸ್ಟಿಗೆ ಮಾತ್ರ ಸೂಕ್ತವಲ್ಲ. ಮಧ್ಯಾಹ್ನದ ಅಥವಾ ರಾತ್ರಿಯ ಊಟಕ್ಕೂ ಇದು ಸೂಕ್ತ; ಆಫೀಸಿಗೆ ಅಥವಾ ಪ್ರವಾಸ ಹೋಗುವಾಗ ಪ್ಯಾಕ್ ಮಾಡಿ ಒಯ್ಯಲಿಕ್ಕೂ ಇಡ್ಲಿ ಅನುಕೂಲದ ತಿನಿಸು. 

ದಕ್ಷಿಣ ಭಾರತದಲ್ಲಂತೂ ಹೋಟೆಲುಗಳಲ್ಲಿ, ಫಾಸ್ಟ್ ಸರ್ವಿಸ್ ರೆಸ್ಟೊರೆಂಟುಗಳಲ್ಲಿ, ರಸ್ತೆ ಬದಿಯ ಕೈಗಾಡಿ ಕ್ಯಾಂಟೀನುಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ - ಅಂದರೆ ದಿನದ ಎಲ್ಲ ಸಮಯದಲ್ಲಿಯೂ ಇಡ್ಲಿ ಲಭ್ಯ. ಹನ್ನೆರಡು ಸಲ ಮುಂಬೈಗೆ ತರಬೇತಿ ಶಿಬಿರಗಳನ್ನು ನಡೆಸಲು ಹೋದಾಗ ಅಲ್ಲಿನ ಫೋರ್ಟ್ ಪ್ರದೇಶದ ಹೋಟೆಲುಗಳಲ್ಲಿ ಉಳಿದಿದ್ದೆ. ಆಗೆಲ್ಲ ದಿನದ ಮೂರೂ ಹೊತ್ತು ನಾನು ಇಡ್ಲಿ ಸೇವಿಸಿ ಹಸಿವು ತಣಿಸಿಕೊಳ್ಳುತ್ತಿದ್ದೆ. ಯಾಕೆಂದರೆ, ಮುಂಬೈಯಲ್ಲಿ ಬೆಳಗ್ಗೆ 4 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ತನಕವೂ ಬಿಸಿಬಿಸಿ ಇಡ್ಲಿ ಲಭ್ಯ. ಹಾಗೂ ಅಲ್ಲಿನ ಹೋಟೆಲುಗಳಲ್ಲಿ ಊಟದಲ್ಲಿ ಅನ್ನ-ಚಪಾತಿ ಜೊತೆಗೆ ನೀಡುವ ಪಲ್ಯ-ಗೊಜ್ಜು-ಗಸಿ ಇತ್ಯಾದಿಗಳಿಗೆ ಹಾಕಿರುತ್ತಿದ್ದ ಎಣ್ಣೆ ನನಗೆ ಹಿತವೆನಿಸುತ್ತಿರಲಿಲ್ಲ. ನಾನು ಗುಂಟೂರಿಗೆ ಹೋಗಿದ್ದಾಗ ಗಮನಿಸಿದ್ದ ಒಂದು ಸಂಗತಿ: ಅಲ್ಲಿ ಇಡ್ಲಿ ಜೊತೆ ನೀಡುವ ಚಟ್ನಿ ಭಯಂಕರ ಖಾರ. ಹೊಸಬರು ಅದನ್ನು ಸೇವಿಸಿದರೆ ತಕ್ಷಣವೇ ಹೊಟ್ಟೆಯಲ್ಲಿ ಉರಿ ಏಳುತ್ತಿತ್ತು. ಆದರೆ ಅಲ್ಲಿನವರು ಇಡ್ಲಿ ಜೊತೆ ಅದರ ನಾಲ್ಕು ಪಟ್ಟು ಚಟ್ನಿ ಹಾಕಿಸಿಕೊಂಡು ಚಪ್ಪರಿಸಿ ತಿನ್ನುತ್ತಿದ್ದರು!

ಆರೋಗ್ಯದ ದೃಷ್ಟಿಯಿಂದಲೂ ಇಡ್ಲಿ ಅತ್ಯುತ್ತಮ ಆಹಾರ. ಇದರಲ್ಲಿರುವ ಅಕ್ಕಿಯ ಮೂಲಕ ಶರ್ಕರಪಿಷ್ಟ ಹಾಗೂ ಉದ್ದಿನ ಕಾಳು ಮೂಲಕ ಪ್ರೊಟೀನ್ ನಮ್ಮ ದೇಹಕ್ಕೆ ಸಿಗುತ್ತದೆ. ಅಂದರೆ ಇಡ್ಲಿ ತಿಂದಾಗ ದೇಹಕ್ಕೆ ಶಕ್ತಿ ಹಾಗೂ ಪ್ರೊಟೀನ್ ಎರಡೂ ಲಭ್ಯ. ಅದಲ್ಲದೆ, ಜೊತೆಗೆ ಸೇವಿಸುವ ಸಾಂಬಾರ್ ಮತ್ತು ಚಟ್ನಿಯ ಮೂಲಕ ದೇಹಕ್ಕೆ ಇತರ ಪೋಷಕಾಂಶಗಳೂ ಲಭ್ಯ. ವರುಷಗಳು ದಾಟಿದಂತೆ, ಇತರ ಧಾನ್ಯ ಮತ್ತು ಆಹಾರವಸ್ತುಗಳಿಂದಲೂ ಇಡ್ಲಿ ತಯಾರಿಸುತ್ತಿದ್ದಾರೆ - ರಾಗಿ, ಗೋಧಿ (ರವೆ), ಮರಗೆಣಸು, ಓಟ್ಸ್, ಬಾರ್ಲಿ ಇತ್ಯಾದಿಗಳಿಂದ. ಇಡ್ಲಿ ಹಿಟ್ಟಿಗೆ ತರಕಾರಿ ಹಾಗೂ ಸೊಪ್ಪು ಬೆರಸಿ ತಯಾರಿಸಿದ ಇಡ್ಲಿ ಕೂಡ ಜನಪ್ರಿಯ. ಹಾಗಾಗಿ, ಬಹುಪಾಲು ಹೋಟೆಲುಗಳಲ್ಲಿ ಸಂಜೆಯ ಉಪಾಹಾರಕ್ಕೆ "ರವೆ ಇಡ್ಲಿ” ಲಭ್ಯ. ಬೇಯಿಸಿದ ಇಡ್ಲಿಯನ್ನು ಎಣ್ಣೆಯಲ್ಲಿ ಹುರಿದು ತಯಾರಿಸುವ “ಫ್ರೈಡ್ ಇಡ್ಲಿ” ಕೂಡ ಇಡ್ಲಿಯ ಜನಪ್ರಿಯ ರೂಪಾಂತರ. 

ದಕ್ಷಿಣ ಭಾರತದ ಹೋಟೆಲಿಗೆ ಹೋಗಿ, ನೀವು “ಒಂದು ಪ್ಲೇಟ್ ಇಡ್ಲಿ ತನ್ನಿ” ಎಂದರೆ, ಅಲ್ಲಿನ ಸರ್ವರ್ "ವಡೆ ಬೇಡವೇ?" ಎಂದು ಕೇಳಿಯೇ ಕೇಳುತ್ತಾನೆ. ಯಾಕೆಂದರೆ, ಇಡ್ಲಿ ಮತ್ತು ವಡೆಯನ್ನು ಜೊತೆಯಾಗಿ ತಿನ್ನುವುದು ವಾಡಿಕೆ. ಎಣ್ಣೆಯಲ್ಲಿ ಹುರಿದು ತಯಾರಿಸುವ (ವೃತ್ತಾಕಾರದ) ಉದ್ದಿನ ತಿನಿಸು ವಡೆ. ಇದು ಕೂಡ ಸಾಂಬಾರ್ ಮತ್ತು ಚಟ್ನಿ ಜೊತೆ ಚಪ್ಪರಿಸಿ ತಿನ್ನುವ ತಿನಿಸು.    

ಆದ್ದರಿಂದಲೇ ಇಡ್ಲಿ ಈಗ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿಲ್ಲ. ಸೀಮೋಲ್ಲಂಘನ ಮಾಡಿ, ಇತರ ಹಲವು ದೇಶಗಳಲ್ಲಿಯೂ ಜನಪ್ರಿಯವಾಗಿದೆ. 2019ರಲ್ಲಿ “ಉಬೆರ್ ಈಟ್ಸ್” ನಡೆಸಿದ ಒಂದು ಸರ್ವೆಯ ಅನುಸಾರ, ವಿದೇಶಗಳಲ್ಲಿ ಅತ್ಯಧಿಕ ಇಡ್ಲಿ ಸೇವಿಸುವುದು ಲಂಡನಿನಲ್ಲಿ; ಇಡ್ಲಿ ಸೇವನೆಯ ಎರಡನೆಯ ಸ್ಥಾನ ಅಮೇರಿಕಾದ ಸಾನ್-ಫ್ರಾನ್ಸಿಸ್ಕೋ ಪಡೆದಿತ್ತು. 

ಇಡ್ಲಿಯ ಮೂಲದ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಪ್ರಾಚೀನ ಕನ್ನಡ ಗ್ರಂಥ “ವಡ್ಡಾರಾಧನೆ"ಯಲ್ಲಿ “ಇಡ್ಡಲಿಗೆ" ಎಂಬ ಪದವಿದೆ. ಇದರಿಂದಲೇ “ಇಡ್ಲಿ" ಎಂಬ ಪದ ಉಗಮವಾಯಿತೆಂದು ತಿಳಿಯಲಾಗಿದೆ. ಕ್ರಿಶ 1025ರ ಕೃಷಿಸಂಸ್ಕೃತಿಯ ಮಾಹಿತಿ ಗ್ರಂಥ “ಲೋಕೋಪಕಾರ" ಮತ್ತು 1130ರ ಸಾಮಾಜಿಕ - ಸಾಂಸ್ಕೃತಿಕ ಸಂಸ್ಕೃತ ಗ್ರಂಥ “ಮನಸೋಲ್ಲಾಸ” - ಇವೆರಡು ಗ್ರಂಥಗಳಲ್ಲಿಯೂ ಇಡ್ಲಿಯಂತಹ ತಿನಿಸಿನ ಪ್ರಸ್ತಾಪವಿದೆ. 

ಒಂದು ವಿಷಯದಲ್ಲಿ ಎಚ್ಚರವಿರಲಿ. ಕೆಲವು ಕ್ಯಾಂಟೀನುಗಳಲ್ಲಿ, ಆಹಾರ ಮಾರಾಟ ಮಾಡುವ ಕೈಗಾಡಿಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸಿಕ್ ಬಳಸುತ್ತಾರೆ. ಅಂದರೆ, ಇಡ್ಲಿ ತಟ್ಟೆಗಳಲ್ಲಿ ಬಟ್ಟೆ ಹರವಿ ಅದರಲ್ಲಿ ಇಡ್ಲಿ ಹಿಟ್ಟು ಸುರುವಿ ಬೇಯಿಸಲು ಇಡುವ ಬದಲಾಗಿ, ಪ್ಲಾಸ್ಟಿಕ್ ಹಾಳೆ ಹರವಿ, ಅದರಲ್ಲಿ ಇಡ್ಲಿ ಹಿಟ್ಟು ಸುರುವಿ ಬೇಯಿಸಲು ಇಡುತ್ತಾರೆ. ಪ್ಲಾಸ್ಟಿಕ್ ಬಿಸಿಯಾದಾಗ ಅದರಲ್ಲಿರುವ ಅಪಾಯಕಾರಿ ರಾಸಾಯನಿಕಗಳು “ಲೀಚ್" ಆಗುತ್ತವೆ (ಅಂದರೆ ಪ್ಲಾಸ್ಟಿಕಿಗೆ ತಗಲಿಕೊಂಡಿರುವ ವಸ್ತುವಿನಲ್ಲಿ ಸೇರಿಕೊಳ್ಳುತ್ತವೆ) ಎಂಬುದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ. ಅಂತಹ ಇಡ್ಲಿ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎಂಬುದು ಖಂಡಿತ. 

ಮಾರ್ಚ್ 30 “ಜಾಗತಿಕ ಇಡ್ಲಿ ದಿನ" ಎಂಬುದಾಗಿ 2015ರಲ್ಲಿ ಘೋಷಿಸಲ್ಪಟ್ಟಿದೆ. ಬ್ರೆಡ್‌ಗಿಂತಲೂ ಉತ್ತಮ ಆಹಾರ ಮತ್ತು ರೋಗಿಗಳಿಗೆ ಅತ್ಯುತ್ತಮ ಆಹಾರ ಎಂದು ಮನ್ನಣೆ ಗಳಿಸಿರುವ ಭಾರತದ ಪ್ರಾಚೀನ, ಪಾರಂಪರಿಕ ಶ್ರೇಷ್ಠ ಆಹಾರವಾದ ಇಡ್ಲಿಗೆ ಜಾಗತಿಕ ಮನ್ನಣೆ ಸಿಕ್ಕಿರುವುದು ನಾವೆಲ್ಲರೂ ಸಂಭ್ರಮಿಸಬೇಕಾದ ಸಂಗತಿ.