ADDOOR

ಕಗ್ಗ ದರ್ಶನ - 37

Published on Saturday, September 01, 2018 - 06:53
ಕಗ್ಗ ದರ್ಶನ -  37

ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ

ನೀನೆಷ್ಟು ಉಂಡರೇನು? ಅದರಲ್ಲಿ ನಿನ್ನ ದೇಹದ ಪುಷ್ಟಿಗೆ ಒದಗುವುದು ನಿನ್ನ ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕಿದ್ದೆಲ್ಲ ಕಸವಾಗಿ ನಿನ್ನ ಶರೀರದಿಂದ ಹೊರಗೆ ಹೋಗುತ್ತದೆ - ಈ ಸಾರ್ವಕಾಲಿಕ ಸರಳ ವಿಷಯವನ್ನು ಎತ್ತಿ ಹೇಳುತ್ತಾ, ಅದರ ಆಧಾರದಿಂದ ಗಹನ ವಿಚಾರವೊಂದನ್ನು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು ಹೀಗೆ ಮಂಡಿಸುತ್ತಾರೆ: ನೀನೆಷ್ಟು ಗಳಿಸಿದರೂ ನಿನಗೆ ದಕ್ಕುವುದೆಷ್ಟು? ಒಂದು ಮುಷ್ಟಿ ಪಿಷ್ಟ, ಅಲ್ಲವೇ?

ಈ ಮುಕ್ತಕದ ಮೊದಲನೆಯ ಸರಳ ವಿಷಯವನ್ನು ನಾವೆಲ್ಲರೂ ಅನುಭವಿಸಿ ಅರಿತಿದ್ದೇವೆ. ಊಟ ರುಚಿಯಾಗಿತ್ತೆಂದು ಹೆಚ್ಚು ತಿಂದರೆ ಏನಾಗುತ್ತದೆ? ಆರೋಗ್ಯ ಹದಗೆಡುತ್ತದೆ; ಅಜೀರ್ಣವಾಗಿ ವಾಂತಿ ಭೇದಿಯಾಗುತ್ತದೆ ಎಂದು ನಮಗೆಲ್ಲರಿಗೂ ಗೊತ್ತಿದೆ. ಹಾಗಾಗಿ, ಆಹಾರ ಎಷ್ಟೇ ರುಚಿಯಾಗಿದ್ದರೂ ನಮ್ಮ ಹೊಟ್ಟೆಯ ಹದವರಿತು ತಿನ್ನುತ್ತೇವೆ.

ಹಣ ಗಳಿಸುವ ವಿಚಾರದಲ್ಲಿಯೂ, ನಮಗೆ ಸಲ್ಲಬೇಕಾದ್ದಕ್ಕಿಂತ ಹೆಚ್ಚಿಗೆ ಗಳಿಸಿದರೆ ಅದನ್ನು ದಕ್ಕಿಸಿಕೊಳ್ಳಲಾಗದು ಎಂಬುದು ನಮಗೆ ಗೊತ್ತಿದೆ. ಆದರೆ, ನಮ್ಮ ದುರಾಶೆ ನಮ್ಮ ವಿವೇಕಕ್ಕೆ ಮಂಕು ಕವಿಸುತ್ತದೆ. ನಮ್ಮ ರಾಜ್ಯದ ಕಬ್ಬಿಣದ ಅದಿರನ್ನು ಕೊಳ್ಳೆ ಹೊಡೆದು ಗಳಿಸಿದ ಕೋಟಿಗಟ್ಟಲೆ ಹಣವನ್ನು ಕರ್ನಾಟಕದ ಮಾಜಿ ಮಂತ್ರಿಯೊಬ್ಬರಿಗೆ ದಕ್ಕಿಸಿಕೊಳ್ಳಲಾಯಿತೇ? ತಿರುಪತಿ ತಿಮ್ಮಪ್ಪನಿಗೆ ೪೫ ಕೋಟಿ ರೂಪಾಯಿಯ ಕಿರೀಟ ಒಪ್ಪಿಸಿದರೂ ಅನ್ಯಾಯದ ಹಣವನ್ನೆಲ್ಲ ದಕ್ಕಿಸಿಕೊಳ್ಳಲಾಗಲಿಲ್ಲ. ನ್ಯಾಯಾಧೀಶರಿಗೆ ೧೦ ಕೋಟಿ ರೂಪಾಯಿ ಲಂಚ ಕೊಟ್ಟರೂ ಅವರು ಜೈಲುವಾಸ ತಪ್ಪಿಸಿಕೊಳ್ಳಲಾಗಲಿಲ್ಲ.

ಗ್ರೀಕ್ ಸಾಮ್ರಾಟ ಅಲೆಗ್ಸಾಂಡರ್, ಜಗತ್ತಿನ ದೇಶಗಳನ್ನೆಲ್ಲ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯಿಂದ ದಂಡಯಾತ್ರೆ ಹೊರಟ; ಹಲವು ಸಾಮ್ರಾಜ್ಯಗಳನ್ನು ಗೆದ್ದ. ಕೊನೆಗೆ, ತನ್ನ ಸಾವಿನ ಸೂಚನೆ ಸಿಕ್ಕಾಗ ತನ್ನ ಸಹವರ್ತಿಗಳಿಗೆ ಹೀಗೆಂದು ಆದೇಶ ನೀಡಿದನಂತೆ: "ನನ್ನ ಶವಯಾತ್ರೆಯಲ್ಲಿ, ನನ್ನ ಎರಡೂ ಕೈಗಳು ಶವಪೆಟ್ಟಿಗೆಯಿಂದ ಹೊರಗೆ ನೇತಾಡುತ್ತಿದ್ದು, ನೆರೆದ ಜನರಿಗೆಲ್ಲ ಕಾಣಿಸಬೇಕು. ಚಕ್ರಾಧಿಪತಿ ಅಲೆಗ್ಸಾಂಡರ್ ಈ ಭೂಮಿ ಬಿಟ್ಟು ಹೋಗುವಾಗ ತನ್ನ ಸಂಪತ್ತಿನಲ್ಲಿ ಏನನ್ನೂ ಒಯ್ಯಲಿಲ್ಲ; ಎಲ್ಲವನ್ನೂ ಇಲ್ಲೇ ಬಿಟ್ಟು ಬರಿಗೈಯಲ್ಲೇ ಹೋದ ಎಂಬುದು ಎಲ್ಲ ಜನರಿಗೂ ತಿಳಿಯಲಿ."

ಈ ಸಾರ್ವಕಾಲಿಕ ಸತ್ಯವನ್ನು ಒಪ್ಪಿಕೊಳ್ಳೋಣ. ನಮಗೆ ಸಲ್ಲಬೇಕಾದ್ದಕ್ಕಿಂತ ಹೆಚ್ಚು ಗಳಿಸಿ, ಸಂಪತ್ತನ್ನು ಕೂಡಿ ಹಾಕುವ ಚಟ ಬಿಟ್ಟು ಬಿಡೋಣ.

ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ
ನಾಣ್ಯ ಸಂಚಿಕೆಗಂತು ತಣಿವಪ್ಪುದುಂಟೆ
ಪಣ್ಯವಾಗಿಸಿತೆಲ್ಲ ಮನುಜ ಬಂಧುತೆಯ ಹಣ
ಸನ್ನೆಯದು ಕಲಿದೊರೆಗೆ - ಮರುಳ ಮುನಿಯ

ಆಹಾರ ತಿಂದು ಹೊಟ್ಟೆ ತುಂಬಿದೊಡನೆ ತೃಪ್ತಿಯಿಂದ ತೇಗು ಬರುತ್ತದೆ. ಆದರೆ ಕೋಟಿಗಟ್ಟಲೆ ರೂಪಾಯಿ ಹಣ - ಸಂಪತ್ತು ಸಂಗ್ರಹಿಸಿ(ನಾಣ್ಯ ಸಂಚಿಕೆ)ದರೂ ಮನುಷ್ಯನಿಗೆ ತೃಪ್ತಿ (ತಣಿವು) ಸಿಗುತ್ತದೆಯೇ? ಈ ಹಣ (ಸಂಪತ್ತು) ಎಂಬುದು ಮನುಷ್ಯ-ಮನುಷ್ಯರ ಸಂಬಂಧಗಳನ್ನೇ ವ್ಯಾಪಾರ(ಪಣ್ಯ)ವನ್ನಾಗಿ ಮಾಡಿದೆ. ಇದು ಕಲಿಯುಗದ ಕಲಿದೊರೆಯ ಪ್ರವೇಶಕ್ಕೆ ದಾರಿಯೊದಗಿಸಿದೆ ಎಂದು ಸಂಪತ್ತು ಸಂಗ್ರಹದ ಅನಾಹುತವನ್ನು ಈ ಮುಕ್ತಕದಲ್ಲಿ ವಿವರಿಸಿದ್ದಾರೆ ಮಾನ್ಯ ಡಿವಿಜಿಯವರು.

ಇಂದು ಮಾನವ ಸಂಬಂಧಗಳಲ್ಲಿ ಆತ್ಮೀಯತೆ ಕಡಿಮೆಯಾಗುತ್ತಿದೆ ಅಥವಾ ಮಾಯವಾಗುತ್ತಿದೆ. ಬಹುಪಾಲು ಸಂಬಂಧಗಳನ್ನು ವ್ಯವಹಾರದ ರೀತಿಯಲ್ಲಿ ಮುಂದುವರಿಸಲಾಗುತ್ತಿದೆ. ಇವನಿಂದ ಅಥವಾ ಇವಳಿಂದ ನನಗೇನು ಲಾಭ? ಎಂಬ ಲೆಕ್ಕಾಚಾರವೇ ಮುಖ್ಯವಾಗುತ್ತಿದೆ. ಯಾಕೆಂದರೆ ಎಲ್ಲದರಲ್ಲಿಯೂ ಲಾಭ ಮಾಡಿಕೊಂಡು ಸಂಪತ್ತು ಗುಡ್ದೆ ಹಾಕುವ ಹುನ್ನಾರ.

ಫೆಬ್ರವರಿ ೧, ೨೦೧೭ರಂದು ಕೇಂದ್ರ ಸರಕಾರದ ವಿತ್ತ ಸಚಿವರು ಮಂಡಿಸಿದ ಕೇಂದ್ರ ಬಜೆಟಿನ ಕೆಲವು ಆರ್ಥಿಕ ನಿಯಂತ್ರಣದ ಕ್ರಮಗಳಿಂದಾಗಿ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಬೀಳಬಹುದು. ರೂ.೫೦ ಲಕ್ಷದಿಂದ ರೂಪಾಯಿ ಒಂದು ಕೋಟಿ ವಾರ್ಷಿಕ ಆದಾಯ ಹೊಂದಿದವರಿಗೆ ಶೇಕಡಾ ೩೦ ಆದಾಯ ತೆರಿಗೆ ಮತ್ತು ಶೇಕಡಾ ೧೦ ಹೆಚ್ಚುವರಿ ತೆರಿಗೆ (ಸರ್ಚಾರ್ಜ್) ವಿಧಿಸಲಾಗಿದೆ. ರೂಪಾಯಿ ಒಂದು ಕೋಟಿಗಿಂತ ಅಧಿಕ ಅಧಿಕ ವಾರ್ಷಿಕ ಆದಾಯ ಇರುವವರಿಗೆ ಶೇಕಡಾ ೩೦ ಆದಾಯ ತೆರಿಗೆ ಮತ್ತು ಶೇಕಡಾ ೧೫ ಹೆಚ್ಚುವರಿ ತೆರಿಗೆ ಮುಂದುವರಿಸಲಾಗಿದೆ.

ರೂಪಾಯಿ ಮೂರು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸುವುದನ್ನು ನಿಷೇಧಿಸಲಾಗುವುದು. ಇದರಿಂದಾಗಿ, ಜಮೀನು ಹಾಗೂ ಸ್ಥಿರ ಆಸ್ತಿ ಖರೀದಿಗಾಗಿ ಲಕ್ಷಗಟ್ಟಲೆ ಕೋಟಿಗಟ್ಟಲೆ ರೂಪಾಯಿಗಳನ್ನು ನಗದು ರೂಪದಲ್ಲಿ ಪಾವತಿಸುವುದು ಮತ್ತು ಬೇನಾಮಿ ವ್ಯವಹಾರ ಮಾಡುವುದು ಇನ್ನು ಸುಲಭವಿಲ್ಲ. ಹಾಗೆಯೇ ಉದ್ಯಮಿ ವಿಜಯ ಮಲ್ಯ ಅವರಂತೆ (ಬ್ಯಾಂಕುಗಳಿಗೆ ಸುಮಾರು ರೂ.೭,೦೦೦ ಕೋಟಿ ಸಾಲ ಬಾಕಿ ಮಾಡಿದ್ದಾರೆ.) ಹಣಕಾಸು ವಂಚನೆ ಆರೋಪಿಗಳು ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಯುವುದಕ್ಕಾಗಿ ಅಂಥವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರಕಾರ ಕಾಯಿದೆ ರೂಪಿಸಲಿದೆ. ರಾಜಕೀಯ ಪಕ್ಷಗಳು ದೇಣಿಗೆಯಾಗಿ ಕೋಟಿಗಟ್ಟಲೆ ರೂಪಾಯಿ ಕೂಡಿ ಹಾಕುವುದಕ್ಕೂ ಈ ಬಜೆಟಿನ ಪ್ರಸ್ತಾಪದಿಂದಾಗಿ ಲಗಾಮು ಬಿದ್ದಿದೆ. ಯಾಕೆಂದರೆ, ರಾಜಕೀಯ ಪಕ್ಷಗಳು ರೂ.೨,೦೦೦ಕ್ಕಿಂತ ಹೆಚ್ಚಿನ ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಪಾವತಿ ಮೂಲಕ ಮಾತ್ರ ಪಡೆಯತಕ್ಕದ್ದು. ಜೊತೆಗೆ ರೂ.೨೦,೦೦೦ಕ್ಕಿಂತ ಅಧಿಕ ದೇಣಿಗೆ ನೀಡುವವರ ಮಾಹಿತಿ ಕೊಡುವುದು ಕಡ್ಡಾಯ. ಎಲ್ಲ ರಾಜಕೀಯ ಪಕ್ಷಗಳು ವಾರ್ಷಿಕ ತೆರಿಗೆ ರಿಟರ್ನ್ ಸಲ್ಲಿಸಬೇಕು. ಈ ಕ್ರಮಗಳಿಂದಾಗಿ, ಅಪಾರ ಸಂಪತ್ತು ಸಂಗ್ರಹಿಸುವ ಪ್ರವೃತ್ತಿ ಕಡಿಮೆಯಾಗಲೆಂದು ಹಾರೈಸೋಣ.