ನಮ್ಮ ಹೆಮ್ಮೆಯ ಭಾರತ (19)
೧೯.ಜಗತ್ತಿನ ಅಪ್ರತಿಮ ಕಲಾರಚನೆ ಆಗ್ರಾದ ತಾಜಮಹಲ್
ಆಗ್ರಾದ ತಾಜಮಹಲನ್ನು ಜಗತ್ತಿನ ಅತ್ಯಂತ ಸುಂದರ ಮತ್ತು ಭವ್ಯ ಸ್ಮಾರಕ ಎನ್ನಬಹುದು. ಇದು ಮೊಘಲ್ ರಾಜ ಷಾಜಹಾನ್, ತನ್ನ ಪ್ರೀತಿಯ ಪತ್ನಿ ಮಮ್ತಾಜಳ ನೆನಪಿಗಾಗಿ ನಿರ್ಮಿಸಿದ ಸ್ಮಾರಕ. ತನ್ನ ಮಗ ಔರಂಗಜೇಬನಿಂದಲೇ
ಬಂಧಿಸಲ್ಪಟ್ಟ ರಾಜ ಷಾಜಹಾನ್ ತನ್ನ ಕೊನೆಗಾಲವನ್ನು ತಾಜಮಹಲನ್ನು ಖಿನ್ನತೆಯಿಂದ ನೋಡುತ್ತ ಕಳೆಯ ಬೇಕಾಯಿತು ಎಂಬುದು ದುರಂತ. ಅವನ ಮರಣಾ ನಂತರ ಅವನನ್ನೂ ಮಮ್ತಾಜಳ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.
ಯಮುನಾ ನದಿಯ ದಡದಲ್ಲಿರುವುದೇ ತಾಜಮಹಲಿನ ಭವ್ಯತೆಯ ಗುಟ್ಟು! ಹಿಂಭಾಗದಲ್ಲಿ ನದಿ ಹರಿಯುತ್ತಿರುವ ಕಾರಣ, ತಾಜಮಹಲಿಗೆ ಯಾವಾಗಲೂ ಅಗಾಧ ಆಕಾಶವೇ ಹಿನ್ನೆಲೆ. ಅದರಿಂದಾಗಿ ತಾಜಮಹಲಿಗೊಂದು ಭವ್ಯ ನೋಟ ಲಭ್ಯ. ಸುಮಾರು ೨೦,೦೦೦ ಕೆಲಸಗಾರರೂ ಕುಶಲಕರ್ಮಿಗಳೂ ೨೦ ವರುಷ ಹಗಲೂರಾತ್ರಿ ದುಡಿದು ತಾಜಮಹಲನ್ನು ನಿರ್ಮಿಸಿದರು. ಅವರ ಶ್ರದ್ಧೆ, ದುಡಿಮೆ, ಕುಸುರಿ ಕೆಲಸ ಅಲ್ಲಿನ ಒಂದೊಂದು ಕಲ್ಲಿನಲ್ಲಿಯೂ ಎದ್ದು ಕಾಣುತ್ತದೆ.
ತಾಜಮಹಲಿನ ಶಿಲೆಗಳ ಕುಸುರಿ ಕೆಲಸ ನೋಡಲು ಒಂದು ದಿನ ಸಾಲದು. ಬೆಳದಿಂಗಳಿನಲ್ಲಿ ತಾಜಮಹಲನ್ನು ನೋಡುವುದು ಒಂದು ಅದ್ಭುತ ಅನುಭವ. ಎತ್ತರಿಸಿದ ಅಡಿಪಾಯದ ನಾಲ್ಕು ಮೂಲೆಗಳಲ್ಲಿರುವ ನಾಲ್ಕು ಗೋಪುರಗಳು ಮತ್ತು ಮುಖ್ಯ ಕಟ್ಟಡದ ಮಧ್ಯದಲ್ಲಿರುವ ಮುಗಿಲೆತ್ತರದ ಗೋಲ, ಇಡೀ ಶಿಲಾರಚನೆಗೊಂದು ವಿಲಕ್ಷಣ ರೂಪ ನೀಡಿವೆ.
ಜಗತ್ತಿನ ಎಲ್ಲೆಡೆಗಳಿಂದ ದಿನದಿನವೂ ಸಾವಿರಾರು ಪ್ರವಾಸಿಗರು ತಾಜಮಹಲನ್ನು ನೋಡಲು ಬರುತ್ತಾರೆ. ನೋಡುತ್ತ ನೋಡುತ್ತ ಮೈಮರೆಯುತ್ತಾರೆ. ಕೊನೆಗೆ ತಮ್ಮದೇ ಚಂದದ ನೆನಪುಗಳೊಂದಿಗೆ, ಬದುಕಿನಲ್ಲಿಡೀ ಮತ್ತೆಮತ್ತೆ ನೋಡಬಹುದಾದ ತಾಜಮಹಲಿನ ಹಿನ್ನೆಲೆಯ ತಮ್ಮ ಫೋಟೋಗಳೊಂದಿಗೆ ವಿದಾಯ ಹೇಳಿ ಹೊರಡುತ್ತಾರೆ.
Related Articles
November 06, 2016
November 06, 2016
November 06, 2016