ADDOOR

ಹಕ್ಕು ಹೋರಾಟ 14: ಮಂಗಳೂರು ತಹಶೀಲ್ದಾರರ ಕಛೇರಿಯಲ್ಲಿ ಕೆಂಪು ಪಟ್ಟಿಯ ಉರುಳು ಸಡಲಿಸುವಲ್ಲಿ ವೃದ್ಧೆಯೊಬ್ಬಳ ಹೋರಾಟ

Published on Saturday, April 20, 2024 - 01:22
ಹಕ್ಕು ಹೋರಾಟ 14: ಮಂಗಳೂರು ತಹಶೀಲ್ದಾರರ ಕಛೇರಿಯಲ್ಲಿ ಕೆಂಪು ಪಟ್ಟಿಯ ಉರುಳು ಸಡಲಿಸುವಲ್ಲಿ ವೃದ್ಧೆಯೊಬ್ಬಳ ಹೋರಾಟ

ಕೆಲಸ ಮಾಡಿಕೊಡಲು ವಿಳಂಬ ಮಾಡುವುದು, ಅನಗತ್ಯ ಕೊಕ್ಕೆ ಹಾಕುವುದು ಮುಂತಾದ ತಂತ್ರಗಳು ಸರಕಾರಿ ಅಧಿಕಾರಿಗಳ ಬಳಿ ಇವೆ. ಸುಲಭದಲ್ಲಿ ವಿಳಂಬವಿಲ್ಲದೆ ತಮ್ಮ ಕೆಲಸವಾಗಲಿ ಎಂದು ಬಯಸಿ ಒಳ ಮಾರ್ಗ ಹಿಡಿಯುವವರು ಒಂದು ವರ್ಗವಾದರೆ, ವಿಳಂಬವಾದರೂ ಅಡ್ಡಿ ಇಲ್ಲ ನ್ಯಾಯಬದ್ಧವಾಗಿಯೇ ಕೆಲಸ ಮಾಡಿಕೊಳ್ಳ ಬಯಸಿ ನೇರ ಮಾರ್ಗ ಹಿಡಿಯುವವರು ಇನ್ನೊಂದು ವರ್ಗ. ಹೀಗೆ ಎರಡನೇ ವರ್ಗದ ವೃದ್ಧ ಮಹಿಳೆಯೊಬ್ಬಳ ಹೋರಾಟದ ಕಥೆ ಇಲ್ಲಿದೆ.

ಶ್ರೀ ಬಿ. ಶ್ರೀನಿವಾಸ ರಾಯರು ಮಂಗಳೂರು ತಾಲೂಕಿನ ಕೊಡಿಯಾಲ ಬೈಲು ಗ್ರಾಮದಲ್ಲಿ 151/4 ಸೆಂಟ್ಸು ಸ್ಥಳದ
ಹಕ್ಕುದಾರರಾಗಿದ್ದರು. ದಿನಾಂಕ 4-6-99ರಂದು ಅವರು ದೈವಾಧೀನರಾದರು. ಅವರ ಪತ್ನಿ ಶ್ರೀಮತಿ ಎಂ.ಸುಖಲತಾ ಎಂಬ
64 ವರ್ಷದ ವೃದ್ಧೆ ತಾ. 23-12-99ರಲ್ಲಿ ಮಂಗಳೂರು ತಹಶೀಲ್ದಾರರಿಗೆ ಒಂದು ಅರ್ಜಿ ಸಲ್ಲಿಸಿ ತನ್ನ ದಿವಂಗತ ಗಂಡನ
ಹೆಸರಿನಲ್ಲಿದ್ದ ಸದ್ರಿ ಆಸ್ತಿಯನ್ನು ತನ್ನ ಹಾಗೂ ತನ್ನ ಐದು ಜನ ಮಕ್ಕಳ ಹೆಸರಿಗೆ ಜಂಟಿಯಾಗಿ ಖಾತೆ ಬದಲಾವಣೆ ಮಾಡಿ
ಕೊಡಬೇಕೆಂದು ವಿನಂತಿಸಿದರು. ಅರ್ಜಿಯೊಂದಿಗೆ ಅರ್.ಟಿ,ಸಿ ಯ ನಕಲನ್ನು ಮತ್ತು ಗಂಡನ ಮರಣ ಪ್ರಮಾಣ ಪತ್ರದ
ನಕಲನ್ನು ಲಗ್ತೀಕರಿಸಿದ್ದರು.

ಸುಮಾರು ಆರು ತಿಂಗಳ ನಂತರ ಸಂಬಂಧಿತ ಗ್ರಾಮ ಲೆಕ್ಕಾಧಿಕಾರಿಯವರೊಡನೆ ವಿಚಾರಿಸಿದಾಗ ಅವರು “ನಿಮ್ಮ ಅರ್ಜಿ
ತಿರಸ್ಕೃತವಾಗಿದೆ” ಎಂದಷ್ಟೇ ಬಾಯ್ದೆರೆಯಾಗಿ ತಿಳಿಸಿದರು. ಯಾಕೆ ತಿರಸ್ಕೃತವಾಗಿದೆ ಎಂಬ ಕಾರಣವನ್ನೂ ಈ ಕುರಿತು
ಯಾವುದೇ ಹಿಂಬರಹವನ್ನೂ ನೀಡಲಿಲ್ಲ. ಆದ್ದರಿಂದ ಶ್ರೀಮತಿ ಸುಖಲತಾರವರು ದಿನಾಂಕ 5-7-2000 ರಂದು ಮಂಗಳೂರು
ತಹಶೀಲ್ದಾರರಿಗೆ ಪುನ: ಒಂದು ಅರ್ಜಿ ಸಲ್ಲಿಸಿದರು. ಈ ಅರ್ಜಿಯ ಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೂ
ಕಳುಹಿಸಿಕೊಟ್ಟರು. ಈ ಅರ್ಜಿಗೂ ಹಿಂಬರಹ ಬರಲಿಲ್ಲ. ತಾರೀಕು  26-7-2000ರಂದು ಗ್ರಾಮ ಲೆಕ್ಕಾಧಿಕಾರಿಯವರನ್ನು ಭೇಟಿಯಾಗಿ ವಿಚಾರಿಸಿದಾಗ ನಿಮ್ಮ ಅರ್ಜಿ ಇನ್ನೂ ‘ಪುಟ್ ಆಪ್’ ಆಗಿಲ್ಲವೆಂದು” ತಿಳಿಸಿದರು.


ಛಲ ಬಿಡದ ತ್ರಿವಿಕ್ರಮನಂತೆ
ಅದೇ ದಿನ ತಾಲೂಕು ಕಚೇರಿಯ "ಸಿ" ವಿಭಾಗದ ಅಧಿಕಾರಿ ಶ್ರೀ ಶ್ರೀಧರ್ ಎನ್ನುವವರನ್ನು ಭೇಟಿಯಾಗಿ ವಿಚಾರಿಸಿದಾಗ ಅವರು ಮರುದಿನ ಬರಲು ಹೇಳಿದರು. ಮರುದಿನವೂ ತಾಲೂಕು ಕಛೇರಿಗೆ ಹೋದಾಗ ಶ್ರೀಧರರು ಇನ್ನು 15 ದಿನ ಬಿಟ್ಟು
ಬರುವಂತೆ ತಿಳಿಸಿದರು. ಇವರ ಅರ್ಜಿಯು ಅದೇ ವಿಭಾಗದಲ್ಲಿರುವ ಶ್ರೀ ಸೀತಾರಾಮ ಎಂಬವರ ಮೇಜಿನ ಮೇಲೆ ಇದ್ದರೂ ‘ಪುಟ್ ಆಪ್’ ಮಾಡಲು 15 ದಿನ ಏಕೆ ಬೇಕು ಎಂದು ಇವರಿಗೆ ಅರ್ಥವಾಗಲಿಲ್ಲ. ಇದನ್ನೆಲ್ಲ ವಿವರಿಸಿ ತಾ. 31-7-2000ರಂದು ತಹಶೀಲ್ದಾರರಿಗೆ ಇನ್ನೊಂದು ಜ್ಞಾಪನ ಪತ್ರ ಬರೆದು ಅದರ ಯಥಾ ಪ್ರತಿಯನ್ನು ದ.ಕ. ಜಿಲ್ಲಾಧಿಕಾರಿಯವರಿಗೂ, ಸಹಾಯಕ ಕಮೀಷನರಿಗೂ ಕಳುಹಿಸಿಕೊಟ್ಟರು. ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ವರ್ತಿಸಿದರು.


ಹಿಂಬರಹವೆಂಬ ಬ್ರಹ್ಮಾಸ್ತ್ರ
ಹೀಗೆ ಮೇಲಿಂದ ಮೇಲೆ ತಾಲೂಕು ಕಛೇರಿಗೆ ಭೇಟಿ ನೀಡಿ, ನಾಲ್ಕೈದು ಜ್ಞಾಪನ ಪತ್ರಗಳನ್ನು ಬರೆದ ಮೇಲೇಯೇ ಅರ್ಜಿದಾರರಿಗೆ ಬುದ್ಧಿ ಕಲಿಸಿಯೇ ಬಿಡಬೇಕೆಂದು ನಿರ್ಧರಿಸಿದ ತಹಶೀಲ್ದಾರರಿಂದ ಸುಖಲತಾರವರಿಗೆ ಒಂದು ಹಿಂಬರಹ ಬಂತು. ಅದು ಹೀಗಿತ್ತು: (ಫೋಟೋ ನೋಡಿ)
ಡಿಡಿಸ್/ಆರ್‍ಆರ್‍ಟಿ/ಸಿಆರ್/419/2000-2001 ತಾಲೂಕು ಕಛೇರಿ, ಮಂಗಳೂರು

ಹಿಂಬರಹ

ವಿಷಯ: ಬೋಳೂರು ಗ್ರಾಮದ ಟಿ.ಎಸ್. ನಂಬ್ರ 1034/ರ 0-151/4 ಎಕ್ರೆ ಜಮೀನಿನ ಖಾತಾ ಬದಲಾವಣೆ ಬಗ್ಗೆ.
ಉಲ್ಲೇಖ: ಎಂಆರ್/669/99-2000.
ಮಂಗಳೂರು ತಾಲೂಕು ಬೋಳೂರು ಗ್ರಾಮದ ಟಿ.ಎಸ್. ನಂಬ್ರ 1034/ರ 0-151/4 ಎಕ್ರೆ ಜಮೀನಿನ ಖಾತಾ ಬದಲಾವಣೆ ಬಗ್ಗೆ ನೀವು ಬರಕೊಂಡ ಅರ್ಜಿ ಬಗ್ಗೆ ತನಿಖೆ ಜರಗಿಸಿ, ಸಂತತಿ ನಕ್ಷೆ ಮತ್ತು ಮರಣ ಸಮರ್ಥನಾ ಪತ್ರದ ಮೂಲ ಪ್ರತಿಯನ್ನು ಹಾಜರುಪಡಿಸಿಲ್ಲವೆಂದು ಎಂ.ಆರ್/669/99-2000ರಂತೆ ತಿರಸ್ಕರಿಸಲಾಗಿದೆ. ಆದುದರಿಂದ ನಿಮ್ಮ ಮರು ಅರ್ಜಿಯನ್ನು ಪರಿಶೀಲಿಸುವರೇ ಇಲ್ಲಿ ಅವಕಾಶ ಇರುವುದಿಲ್ಲ.
ಸೂಕ್ತ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ.
ತಮ್ಮ ವಿಶ್ವಾಸಿ
(ಸಹಿ)-----
ತಹಶೀಲ್ದಾರ್, ಮಂಗಳೂರು ತಾಲೂಕು, ದ.ಕ.
ದಿನಾಂಕ: 7-8-2000

ಇವರಿಗೆ: ಎಂ. ಸುಖಲತಾ
ಕೋಂ ದಿ. ಶ್ರೀನಿವಾಸ ರಾವ್,
ಮಾರಪ್ಪ ಕಾಲೋನಿ, ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ,
ಬೊಕ್ಕಪಟ್ನ, ಮಂಗಳೂರು - 3

ಹಿಂಬರಹದಲ್ಲಿ ಸೂಚಿಸಿದ ಆಕ್ಷೇಪಣೆಗಳೆಲ್ಲವೂ ನಂಬಲರ್ಹವಾಗಿರಲಿಲ್ಲ. ಯಾಕೆಂದರೆ ಸಂತತಿ ನಕ್ಷೆ ಮತ್ತು ಮರಣ ಸಮರ್ಥಣಾ ಪತ್ರದ ಮೂಲ ಪ್ರತಿಯನ್ನು ಹಾಜರುಪಡಿಸಬೇಕೆಂದು ಈ ತನಕ ಯಾರೂ ಬಾಯ್ದೆರೆಯಾಗಲೀ, ಲಿಖಿತವಾಗಲೀ ತಿಳಿಸಿದ್ದೇ ಇಲ್ಲ. ಈ ತನಕ ಅರ್ಜಿಯ ಬಗ್ಗೆ ತನಿಖೆ ಜರಗಿಸಿದ್ದೂ ಇರಲಿಲ್ಲ.

ಸೂಕ್ತ ಪ್ರಾಧಿಕಾರ ಎಂದರೇನು?
ಮೇಲಿನ ಹಿಂಬರಹದಲ್ಲಿ “ಸೂಕ್ತ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ” ಎಂದು ಒಗಟಿನ ಉತ್ತರ ನೀಡಲಾಗಿದೆ. ಅದೇ ಹಿಂಬರಹದಲ್ಲಿ ಸೂಕ್ತ ಪ್ರಾಧಿಕಾರ ಎಂದರೆ ಯಾರು ಎಂದು ತಿಳಿಸಬಹುದಾಗಿತ್ತು. ಆದರೆ ಅದನ್ನು ನೇರವಾಗಿ ತಿಳಿಸದೆ
ಅರ್ಜಿದಾರರಿಗೆ ಮಾನಸಿಕ ಹಿಂಸೆ ನೀಡಲಾಯಿತು. ಶ್ರೀಮತಿ ಸುಖಲತಾರವರು ತನ್ನ ಹೋರಾಟವನ್ನು ಇನ್ನಷ್ಟು
ಮುಂದುವರಿಸಿದರು. ಸೂಕ್ತ ಪ್ರಾಧಿಕಾರ ಎಂದರೆ ಯಾರು ಎಂದು ಪತ್ರ ಬರೆದು ತಹಶೀಲ್ದಾರರನ್ನೇ ಕೇಳಿದರು.
ಇದನ್ನೇ ಪುನ: ಪುನ: ಕೇಳಿ ನಾಲ್ಕು ಜ್ಞಾಪನ ಪತ್ರ ಬರೆದರು. ಇವರನ್ನು ಬೆಂಬಲಿಸಿ ವೇದಿಕೆಯೂ ಎರಡು ಪತ್ರ
ಬರೆಯಿತು. ಹೀಗೆ ಒಟ್ಟು ಆರು ಪತ್ರ ಹೋದ ಮೇಲೆಯೇ ತಹಶೀಲ್ದಾರರು ಮೌನ ಮುರಿದು ತಾ- 5-10-2000ದಲ್ಲಿ ಒಂದು
ಹಿಂಬರಹ ನೀಡಿ ಸೂಕ್ತ ಪ್ರಾಧಿಕಾರ ಎಂದರೆ “ಸಹಾಯಕ ಕಮೀಷನರು” ಎಂದು ತಿಳಿಸಿದರು. ಇದನ್ನು ಮೊದಲಿನ ಹಿಂಬರಹದಲ್ಲಿಯೇ ತಿಳಿಸಬಹುದಾಗಿತ್ತು. ಆದರೆ ಅರ್ಜಿದಾರರಿಗೆ
ಕಿರುಕುಳ ನೀಡುವ ಒಂದೇ ಉದ್ದೇಶದಿಂದ ಅದನ್ನು ತಿಳಿಸದೆ ಒಗಟಿನ ಹಿಂಬರಹ ನೀಡಿದ್ದರು.
ಶ್ರೀಮತಿ ಸುಖಲತಾರವರಿಗೆ ಇನ್ನಷ್ಟು ಛಲ ಬಂತು. ಅವರು ತಾ. 13-10-2000ರಂದು ಸಹಾಯಕ ಕಮೀಷನರಿಗೆ ಹೊಸತಾಗಿ ಅರ್ಜಿ ಸಲ್ಲಿಸಿ ಪಟ್ಟ ತಬ್ದೀಲು ಮಾಡುವಂತೆ ಕೋರಿದರು.

ಹಳ್ಳಕ್ಕೆ ಬಿದ್ದ ತೋಳ
ಮಾನ್ಯ ಸಹಾಯಕ ಕಮೀಷನರು ತಕ್ಷಣ ಪ್ರತಿಕ್ರಯಿಸಿ ಈ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವ ಅವಶ್ಯಕತೆಯೇ ಇರಲಿಲ್ಲವೆಂಬಂತೆ ತಹಶೀಲ್ದಾರರಿಗೆ ಪುನ: ಬರಕೊಳ್ಳಬೇಕೆಂದು ತಿಳಿಸುವ ಹಿಂಬರಹ ನೀಡಿದರು. ಯಾವ ಅಧಿಕಾರಿ ಅರ್ಜಿಯನ್ನು ಒಮ್ಮೆ ತಿರಸ್ಕರಿಸಿದ್ದರೋ ಅದೇ ಅಧಿಕಾರಿ ಅರ್ಜಿಯನ್ನು ಪುನ: ಪರಿಶೀಲಿಸಬೇಕು ಎಂದಾದುದರಿಂದ ಗ್ರಾಮ ಲೆಕ್ಕಿಗರಾದಿಯಾಗಿ ತಹಶೀಲ್ದಾರರ ವರೆಗಿನ ಎಲ್ಲ ಅಧಿಕಾರಿಗಳು ಪೇಚಿಗೆ ಸಿಲುಕಿಕೊಂಡಂತಾಯಿತು.

ಶ್ರೀಮತಿ ಸುಖಲತಾರವರು ಪುನ: ಒಂದು ಅರ್ಜಿ ತಯಾರಿಸಿ ತಹಶೀಲ್ದಾರರಿಗೆ ಸಲ್ಲಿಸಿದರು. ಇವರ ಅರ್ಜಿಯು ಮುಂದಿನ ಕ್ರಮಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಯವರ ಕಚೇರಿಗೆ ಕಳುಹಿಸಲ್ಪಟ್ಟಿದೆಯೆಂದು ತಾಲೂಕು ಕಚೇರಿಯಿಂದ ತಿಳಿದುಕೊಂಡ ನಂತರ ಶ್ರೀಮತಿ ಸುಖಲತಾರವರು ಗ್ರಾಮ ಲೆಕ್ಕಾಧಿಕಾರಿಯವರಿಗೆ ಬರೆದ ಪತ್ರ ನೋಡಿರಿ. ಇಡೀ ಪ್ರಕರಣದಲ್ಲಿ ಕಾನೂನು ಬದ್ಧವಾಗಿ ಹೇಗೆ ಬರೆಯಬಹುದೆಂದು ಇವರು ಪ್ರತ್ಯಕ್ಷ ಮಾಡಿ ತೋರಿಸಿದ್ದಾರೆ.

ಎಂ. ಸುಖಲತಾ
ಕೋಂ ದಿ. ಶ್ರೀನಿವಾಸ ರಾವ್,
ಮಾರಪ್ಪ ಕಾಲೋನಿ, ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ,
ಬೊಕ್ಕಪಟ್ನ, ಮಂಗಳೂರು - 575 003 -ಇವರಿಂದ

ಶ್ರೀ ಪ್ರಕಾಶ್
ಕೊಡಿಯಾಲ್ ಬೈಲ್ ಗ್ರಾಮ ಲೆಕ್ಕಾಧಿಕಾರಿ
ಲೇಡಿಹಿಲ್, ಮಂಗಳೂರು - 575 003 -ಇವರಿಗೆ,

ಮಾನ್ಯರೇ,
ವಿಷಯ: ಪಟ್ಟಾ ತಬ್ದೀಲು ಅರ್ಜಿ ಬಗ್ಗೆ.
ಉಲ್ಲೇಖ: ನನ್ನ ಅರ್ಜಿ ದಿನಾಂಕ 28-11-2000
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ನಾನು ಮಾನ್ಯ ತಹಶೀಲ್ದಾರರಿಗೆ ಸಲ್ಲಿಸಿದ ಅರ್ಜಿ ಮುಂದಿನ ಕ್ರಮಕ್ಕಾಗಿ ತಮ್ಮ
ಕಛೇರಿಗೆ ಕಳುಹಿಸಿರುವ ಬಗ್ಗೆ ಸಂಬಂಧಿತ ಗುಮಾಸ್ತರಲ್ಲಿ  (ಸಿ 5) ವಿಚಾರಿಸಿದಾಗ ತಿಳಿಯಿತು (ಸಂಖ್ಯೆ ಎಂ. ಆರ್. 732-2000-01 ದಿನಾಂಕ 5-12-2000)
ಈ ನಿಟ್ಟಿನಲ್ಲಿ ನಾನು ತಾ. 7-12-2000ರಂದು ಬೆಳಿಗ್ಗೆ ಗಂಟೆ 11-15ಕ್ಕೆ ಸರಿಯಾಗಿ ತಮ್ಮ ಕಛೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ತಮ್ಮನ್ನು ಭೇಟಿಯಾಗಿದ್ದೇನೆ. ಆದರೆ ತಾವು ತಹಶೀಲ್ದಾರ್ ಕಛೇರಿಯಿಂದ ಟಪ್ಪಾಲು ಬಂದಿಲ್ಲ; ಅದಕ್ಕೆ ಇನ್ನೂ 10 ದಿನ ತಗಲುತ್ತದೆ; ಇದಕ್ಕೆ ಇನ್ನೂ ಒಂದು ತಿಂಗಳು ಕಾಲಾವಕಾಶವಿರುವುದರಿಂದ 10 ದಿನ ಬಿಟ್ಟು ಬನ್ನಿ ಎಂದು ತಿಳಿಸಿದ್ದೀರಿ.
ಈ ಪ್ರಕರಣದ ಬಗ್ಗೆ ನೆನಪಿಸುವುದೇನೆಂದರೆ ನನ್ನ ಪ್ರಥಮ ಅರ್ಜಿಯನ್ನು ಸಂಬಂಧಿತ ಮೂಲ ದಾಖಲೆ
ಹಾಜರುಪಡಿಸಿಲ್ಲ ಎಂದು ತಾವು ಎಂ.ಆರ್ 669/99-2000ರಂತೆ ತಿರಸ್ಕರಿಸಿದ್ದೀರಿ. ಆಗಲೂ ನಾನು ಇದೇ ತರಹ ಮೂಲ
ದಾಖಲೆಗಳೊಂದಿಗೆ ತಮ್ಮನ್ನು ಮೂರು-ನಾಲ್ಕು ಬಾರಿ ಮುಖತ: ಭೇಟಿಯಾಗಿದ್ದೆ. ಆದರೆ ತಾವು ತಹಶೀಲ್ದಾರ್
ಕಛೇರಿಯಿಂದ ಅರ್ಜಿ ತಮ್ಮಲ್ಲಿಗೆ ಬಂದಿಲ್ಲ ಎಂದು ಪ್ರತಿ ಭೇಟಿ ಸಮಯದಲ್ಲಿ ತಿಳಿಸುತ್ತಾ, ಕೊನೆಗೆ ದಾಖಲೆ ಹಾಜರು ಪಡಿಸಲು
ಅವಕಾಶ ನೀಡದೆ ಏಕಪಕ್ಷೀಯವಾಗಿ ಅರ್ಜಿಯನ್ನು ತಿರಸ್ಕರಿಸುವರೆ ವರದಿ ಒಪ್ಪಿಸಿದ್ದೀರಿ.
ಆದ್ದರಿಂದ ತಮ್ಮಲ್ಲಿ ಕೇಳುವುದೇನೆಂದರೆ, ತಮ್ಮ ಕಛೇರಿಗೆ ಅರ್ಜಿ ಬಂದಾಗ ಈ ಬಗ್ಗೆ ಸೂಚನಾ ಫಲಕದಲ್ಲಿ ಸೂಚಿಸುವ ಕ್ರಮವಾಗಲಿ ಸಂಬಂಧಿತರಿಗೆ ಸೂಚನಾ ಪತ್ರ ಕಳುಹಿಸುವ ಕ್ರಮವೇನಾದರೂ ಇವೆಯೇ? ಇದ್ದಲ್ಲಿ ಈ ಅರ್ಜಿಯ ಸಂದರ್ಭದಲ್ಲಾದರೂ ಅದನ್ನು ಪೂರೈಸುವಿರಾ? ಈ ಬಾರಿ ಪ್ರತಿ ಭೇಟಿ ಸಂದರ್ಭವನ್ನು ದಾಖಲಿಸುವುದು ಹಾಗೂ
ಮೇಲಾಧಿಕಾರಿಗಳಿಗೆ ತಿಳಿಸುವುದು ನನ್ನ ಕರ್ತವ್ಯವೆಂದು ತಿಳಿದಿದ್ದೇನೆ. ಆದ್ದರಿಂದ ಪ್ರತಿ ಭೇಟಿಯನ್ನು ದಾಖಲಿಸಿ ಪ್ರತಿಗಳನ್ನು ಎಲ್ಲಾ ಮೇಲಾಧಿಕಾರಿಗಳಿಗೂ ಕಳುಹಿಸುತ್ತಿದ್ದೇನೆ. ತಾವು ತಿಳಿಸಿದಂತೆ 10 ದಿನಗಳು ಕಳೆದ ತರುವಾಯ ಮತ್ತೊಮ್ಮೆ ತಮ್ಮನ್ನು ಮೂಲ ದಾಖಲೆಗಳೊಂದಿಗೆ ಭೇಟಿಯಾಗುತ್ತೇನೆ.

ತಮ್ಮ ವಿಶ್ವಾಸಿ,
(ಸಹಿ) ಎಂ. ಸುಖಲತಾ
8-12-2000

ಪ್ರತಿಗಳು:
1. ಮಾನ್ಯ ತಹಶೀಲ್ದಾರ್, ಮಂಗಳೂರು - ನಿರ್ದೇಶನಕ್ಕಾಗಿ
2. ಮಾನ್ಯ ಸಹಾಯಕ ಕಮೀಷನರ್, ಮಂಗಳೂರು - ನಿರ್ದೇಶನಕ್ಕಾಗಿ
3. ಮಾನ್ಯ ಜಿಲ್ಲಾಧಿಕಾರಿಗಳು, ದ.ಕ., ಮಂಗಳೂರು - ನಿರ್ದೇಶನಕ್ಕಾಗಿ
4. ಸಂಚಾಲಕರು, ಬಳಕೆದಾರರ ವೇದಿಕೆ (ರಿ.), ಬಸ್ರೂರು- ಬೆಂಬಲ ಹಾಗೂ ಮಾರ್ಗದರ್ಶನಕ್ಕಾಗಿ.
ಈ ಪತ್ರ ನೋಡಿ ಇಕ್ಕಟ್ಟಿಗೆ ಸಿಲುಕಿದ ಗ್ರಾಮ ಲೆಕ್ಕಾಧಿಕಾರಿಯವರು ಕೂಡಲೇ ವಿಚಾರಣೆ ನಡೆಸಿ ದಾಖಲೆಗಳನ್ನು ತಾಳೆ ನೋಡಿ “ಪುಟ್ ಆಪ್”ನ್ನೂ ಮಾಡಿದರು.

ಪ್ರಕರಣದ ಇತ್ಯರ್ಥ
ಇನ್ನು ಯಾವುದೇ ಆಕ್ಷೇಪಣೆ ಹಾಕಲು ಸಾಧ್ಯವಾಗುವುದಿಲ್ಲವೆಂದು ಅರಿತುಕೊಂಡ ಮಂಗಳೂರು ತಹಶೀಲ್ದಾರರು ಈ ಕೆಳಗಿನ ಪಟ್ಟಾ ತಬ್ದೀಲು ಆದೇಶ ಹೊರಡಿಸಲೇಬೇಕಾಯಿತು.


ಎನ್‍ಡಿಎಸ್/ಎಂಆರ್/ಸಿಆರ್82/2000-01
ತಾಲೂಕು ಕಛೇರಿ, ಮಂಗಳೂರು
ದಿನಾಂಕ: 15-1-2001

ಸಂಚಾಲಕರು
ಬಳಕೆದಾರರ ವೇದಿಕೆ, ಬಸ್ರೂರು (ರಿ.)
ಎಸ್.ಟಿ.ವಿ. ದೇವಸ್ಥಾನದ ಹತ್ತಿರ
ಬಸ್ರೂರು - 576 211 ಇವರಿಗೆ,
ಮಾನ್ಯರೇ,
ವಿಷಯ: ಪಟ್ಟಾ ತಬ್ದೀಲು ಮಾಡುವ ಬಗ್ಗೆ.
ಉಲ್ಲೇಖ: ತಮ್ಮ ಪತ್ರ ಬವೇ ಡಿ/9/1774-5/2000-01, ದಿನಾಂಕ: 8-1-2001

ವಿಷಯಕ್ಕೆ ಸಂಬಂದಿಸಿದಂತೆ ಶ್ರೀಮತಿ. ಎಂ. ಸುಖಲತಾ, ದಿ. ಶ್ರ್ರೀನಿವಾಸ ರಾವ್, ಮಾರಪ್ಪ ಕಾಲೋನಿ, ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ, ಬೊಕ್ಕಪಟ್ನ, ಮಂಗಳೂರು ಇವರು ವಾರೀಸು ಹಕ್ಕಿನಂತೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಸೂಕ್ತ ಕ್ರಮಕೈಗೊಳ್ಳಲು ಕೋಡಿಯಾಲಬೈಲ್ ಗ್ರಾಮಕರಣಿಕರಿಗೆ ಎಂಆರ್ 732/2000-01 ಕಳುಹಿಸಲಾಗಿದ್ದು ಈ ಬಗ್ಗೆ ಕಂದಾಯ ನಿರೀಕ್ಷಕರು ಪರಿಶೀಲಿಸಿ, ವಾರೀಸು ಹಕ್ಕಿನಂತೆ ಅರ್ಜಿದಾರರ ಹೆಸರಿಗೆ ದಿನಾಂಕ 20-12-2000ರಂದು ಆದೇಶಿಸಿ
ಪಹಣಿಯಲ್ಲಿ ದಾಖಲಿಸಲಾಗಿದೆ.

ತಮ್ಮ ವಿಶ್ವಾಸಿ,
(ಸಹಿ)----
ತಹಶೀಲ್ದಾರರು, ಮಂಗಳೂರು ತಾಲೂಕು

ಪ್ರತಿ: 1. ದ.ಕ ಜಿಲ್ಲಾದಿಕಾರಿಯವರಿಗೆ,
2. ಸಹಾಯಕ ಆಯುಕ್ತರು, ಮಂಗಳೂರು ಉಪವಿಭಾಗ, ಮಂಗಳೂರು
3. ಶ್ರೀಮತಿ. ಎಂ. ಸುಖಲತಾ, ಕೋಂ ದಿ. ಶ್ರ್ರೀನಿವಾಸ ರಾವ್, ಮಾರಪ್ಪ ಕಾಲೋನಿ, ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ,
ಬೊಕ್ಕಪಟ್ನ, ಮಂಗಳೂರು ಇವರಿಗೆ: ಗ್ರಾಮಕರಣಿಕರಿಂದ ಪಹಣಿ ಪತ್ರವನ್ನು ಪಡೆಯಲು ಸೂಚಿಸಿದೆ.

ಸುಮಾರು ಒಂದು ವರ್ಷದಷ್ಟು ಕಾಲದ ತನ್ನ ಕಾನೂನುಬದ್ಧ ಹೋರಾಟಕ್ಕೆ ಸಂಪೂರ್ಣ ಮಾಹಿತಿ ಹಾಗೂ ಬೆಂಬಲ ನೀಡಿದ
ವೇದಿಕೆಗೆ ಕೃತಜ್ಞತೆ ಸಲ್ಲಿಸಿ ಶ್ರೀಮತಿ. ಎಂ. ಸುಖಲತಾ ಪತ್ರ ಬರೆದಿದ್ದಾರೆ.

ಫೋಟೋ: ವೃದ್ಧೆ ಎಂ. ಸುಖಲತಾ ಅವರಿಗೆ ಮಂಗಳೂರಿನ ತಹಸೀಲ್ದಾರ್ ಬರೆದ 07-08-2000ದ ಪತ್ರ (ಹಿಂಬರಹ)ದ ಯಥಾಪ್ರತಿ:
ಬಹುಪಾಲು ಸರಕಾರಿ ಅಧಿಕಾರಿಗಳು ಬರೆಯುವ ಪತ್ರಗಳ (1) ಸತಾಯಿಸುವಿಕೆ (2) ಬೇಜವಾಬ್ದಾರಿತನ ಮತ್ತು (3) ದರ್ಪದ ಭಾಷೆಗಳಿಗೆ ಇದೊಂದು ಜ್ವಲಂತ ಪುರಾವೆ.

ಸಂಗ್ರಹ: ಬಳಕೆದಾರರ ಶಿಕ್ಷಣ, 05-03-2001